ಆಗಸ್ಟ್ 12ರ ಮಧ್ಯರಾತ್ರಿ ಗೌಡಗೆರೆಯಲ್ಲಿ ಭೀಮನ ಅಮಾವಾಸ್ಯೆ ಸಂಭ್ರಮ

ಬೆಂಗಳೂರು ದಕ್ಷಿಣ/ಚನ್ನಪಟ್ಟಣ: ಆಗಸ್ಟ್ 12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ, ಚನ್ನಪಟ್ಟಣ ತಾಲೂಕಿನ ಮಳೂರು ಹೋಬಳಿಯಲ್ಲಿರುವ ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಭೀಮನ ಅಮಾವಾಸ್ಯೆಯನ್ನ ವಿಶೇಷ ಪೂಜೆ, ರಥೋತ್ಸವ ಹಾಗೂ ಅಭಿಷೇಕದ ಮೂಲಕ ಆಚರಿಸಲಾಗುತ್ತಿದೆ.

ಆಗಸ್ಟ್ 12ರ ಮಧ್ಯರಾತ್ರಿ 2ಗಂಟೆಯಿಂದಲೇ ಮೂಲ ವಿಗ್ರಹಕ್ಕೆ ಭಕ್ತರೇ ಸ್ವತಃಹ ಹಾಲಿನ ಅಭಿಷೇಕ ಮಾಡುವ ಅವಕಾಶವಿದ್ದು ವರ್ಷಕ್ಕೆ ಈ ಒಂದು ದಿನ ಮಾತ್ರವೇ ಈ ಪುಟ್ಟ ವಿಗ್ರಹವನ್ನ ಖಜಾನೆಯಿಂದ ಹೊರ ತೆಗೆದು ಸಾರ್ವಜನಿಕರಿಗೆ ದರ್ಶನ ಹಾಗೂ ಅಭಿಷೇಕಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಕೇವಲ 12 ಗಂಟೆಗಳ ಕಾಲ ಮಾತ್ರವೇ ಈ ಅಭಿಷೇಕ ನಡೆಯಲಿದ್ದು ಇದಕ್ಕಾಗಿ ಹಿಂದಿನ ದಿನವೇ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರದಲ್ಲಿ ಉಳಿದುಕೊಳ್ಳುತ್ತಾರೆ.

ಭೀಮನ ಅಮಾವಾಸ್ಯೆಯ ಪ್ರಾರಂಭದ ಮಧ್ಯರಾತ್ರಿ ಹಾಲಿನ ಅಭಿಷೇಕ ಶುರುವಾದರೆ, ಇತ್ತ 4.28ಕ್ಕೆ ಗರ್ಭಗುಡಿಯ ಶಕ್ತಿಶಾಲಿ ಚಾಮುಂಡೇಶ್ವರಿ ಅಮ್ಮನಿಗೆ ಹಾಲರವಿ ಸೇವೆಯ ಮೂಲಕ ಸರ್ವಾಭಿಷೇಕವೇ ನೆರವೇರಲಿದೆ. ಹಾಲು, ಮೊಸರು, ಅರಿಶಿಣ, ಕುಂಕುಮ ಸೇರಿ ವಿವಿಧ ಬಗೆಯ ದ್ರವ್ಯಗಳಿಂದ ಜಗನ್ಮಾತೆಗೆ ಅಭಿಷೇಕ ನೆರವೇರಿಸಲಾಗುತ್ತದೆ. ಬತೋಬ್ಬರಿ 45 ನಿಮಿಷಕ್ಕು ಹೆಚ್ಚು ಕಾಲ ಈ ಮಹಾಪೂಜೆ ನಡೆಯಲಿದ್ದು, ಪೂಜೆ ಬಳಿಕ ಸಾರ್ವಜನಿಕರಿಗೆ ಚಾಮುಂಡೇಶ್ವರಿ ಅಮ್ಮನ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಎರಡು ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ’ ಸರ್ವ ಭಕ್ತರಿಗು ದಾಸೋಹ ವ್ಯವಸ್ಥೆ

2025ರ ಭೀಮನ ಅಮಾವಾಸ್ಯೆಯಂದು ಒಂದು ಲಕ್ಷಕ್ಕು ಹೆಚ್ಚು ಭಕ್ತರು ಈ ಪುಣ್ಯ ದಿನದಂದು ಸೇರಿ ಶಕ್ತಿದೇವತೆಯ ದರ್ಶನ ಪಡೆದಿದ್ದರು. ಈ ವರ್ಷವೂ ಎರಡು ಲಕ್ಷ ಭಕ್ತರು ಆಗಮಿಸುವ ನಿರೀಕ್ಷಿಸಿದ್ದು ಹೀಗೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ನಿತ್ಯ ನಿರಂತರವಾಗಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ದಾಸೋಹ ಭವನ ಮಾತ್ರವಲ್ಲದೆ, ಕ್ಷೇತ್ರದ ಇತರೆಡೆಯು ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

‘ಮಧ್ಯಾಹ್ನ 12.30ಕ್ಕೆ ದೊಡ್ಡ ತೇರಿನ ರಥೋತ್ಸವ’

ಇಡೀ ರಾತ್ರಿಯೆಲ್ಲ ಚಾಮುಂಡೇಶ್ವರಿ ಅಮ್ಮನವರಿಗೆ ಹಾಲಿನ ಅಭಿಷೇಕ, ಪೂಜೆ ನೆರವೇರಿಸಿದ ಬಳಿಕ ಮಧ್ಯಾಹ್ನ 12.30ಕ್ಕೆ ದೊಡ್ಡ ರಥೋತ್ಸವ ನಡೆಯಲಿದೆ. ರಥಕ್ಕೆ ಕಳಶ ಪ್ರತಿಷ್ಟಾಪಿಸಿ, ಚಾಮುಂಡೇಶ್ವರಿ ಅಮ್ಮನ ಉತ್ಸವ ಮೂರ್ತಿಯನ್ನ ರಥದಲ್ಲಿ ಇರಿಸಿ ಕ್ಷೇತ್ರದಲ್ಲಿ ತೇರನ್ನ ಎಳೆಯಲಾಗುತ್ತೆ. ಈ ಅವಿಸ್ಮರಣೀಯ ಕ್ಷಣಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾಗಲಿದ್ದು ಗಣ್ಯರು, ಭಕ್ತರಿಂದಲೇ ರಥೋತ್ಸವಕ್ಕೆ ಚಾಲನೆ ಸಿಗಲಿದೆ‌.

‘ಸರತಿ ಸಾಲಿನಲ್ಲಿರುವ ಭಕ್ತರಿಗೆ ಬಾದಾಮಿ ಹಾಲು’ ನೀರಿನ ವ್ಯವಸ್ಥೆ’

ಮೊಟ್ಟ ಮೊದಲ ಬಾರಿಗೆ ಭೀಮನ ಅಮಾವಾಸ್ಯೆಯಂದು ಗೌಡಗೆರೆ ಕ್ಷೇತ್ರಕ್ಕೆ ಬರುವ ಸಾವಿರಾರು ಸಂಖ್ಯೆಯ ಭಕ್ತರಿಗಾಗಿ ಸರತಿ ಸಾಲಿನಲ್ಲೇ ಬಾದಾಮಿ ಹಾಲು, ಕುಡಿಯುವ ನೀರು, ಆಯಾಸ ಆಗದಂತೆ ಚಾಕ್ಲೇಟ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಗಂಟೆಗಳ ಕಾಲ ಕಾದು ತಾಯಿ ದರ್ಶನ ಪಡೆಯೋ ಭಕ್ತರಿಗಾಗಿ ದೇಗುಲದ ಆಡಳಿತ ಮಂಡಳಿ ಈ ನೂತನ ವ್ಯವಸ್ಥೆ ಮಾಡಿಕೊಂಡಿದೆ.

ಉಚಿತ ಪಾರ್ಕಿಂಗ್ ವ್ಯವಸ್ಥೆ, ಎಂದಿನಂತೆ ವಿಐಪಿ ಟಿಕೆಟ್ ಇಲ್ಲ.!

ಈಗಾಗಲೇ ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರ, ಹಣ ಕೊಟ್ಟು ತಾಯಿ ದರ್ಶನ ಪಡೆಯುವ ಪದ್ಧತಿಗೆ ಎಂದಿನಂತೆ ಬ್ರೇಕ್ ಹಾಕಲಾಗಿದೆ. ದೇಗುಲ ಪ್ರಾರಂಭವಾಗಿ ಇಂದಿನವರೆಗು, ಮುಂದೆಯು ಈ ಟಿಕೆಟ್ ದರ್ಶನಕ್ಕೆ ಬ್ರೇಕ್ ಹಾಕಿದೆ. ಅಲ್ಲದೆ ಪಾರ್ಕಿಂಗ್ ವ್ಯವಸ್ಥೆಯು ದೇಗುಲದ ವತಿಯಿಂದಲೇ ಉಚಿತವಾಗಿದ್ದು ಇತರೆ ಖಾಸಗಿಯವರ ಪಾರ್ಕಿಂಗ್‌ಗು ದೇಗುಲಕ್ಕು ಯಾವುದೇ ಸಂಬಂಧ ಇರೋದಿಲ್ಲ. ಪೊಲೀಸರು ನೀಡುವ ಸೂಚನೆ ಪಾಲಿಸಿ ದೇಗುಲದ ಆಡಳಿತ ಮಂಡಳಿ ಜೊತೆ ಸಹಕರಿಸಿ ಅಂತಾರೆ ಆಡಳಿತ ಮಂಡಳಿಯವರು.

ಒಟ್ಟಾರೆ, ಬೇಡಿದ್ದನ್ನು ಕರುಣಿಸೋ ಚಾಮುಂಡೇಶ್ವರಿ ಅಮ್ಮನ ಈ ಸುದಿನ ಅತ್ಯಂತ ಅವಿಸ್ಮರಣೀಯ ದಿನಗಳಲ್ಲಿ ಒಂದು. ಈ ದಿನ ಬಂದು ನೀವು ಭಕ್ತಿಯಿಂದ ಬೇಡಿದ್ದನ್ನು ಆ ತಾಯಿ ನೆರವೇರಿಸುತ್ತಾಳೆಂಬ ನಂಬಿಕೆ ಭಕ್ತರದ್ದು.

ಪ್ರತಿ ವರ್ಷದಂತೆ ಈ ವರ್ಷವೂ ಭೀಮನ ಅಮಾವಾಸ್ಯೆಯ ವಿಶೇಷ ಪೂಜೆ ನೆರವೇರುತ್ತಿದ್ದು ಲೋಕ ಕಲ್ಯಾಣ ಹಾಗೂ ಭಕ್ತರ ಒಳಿತಿಗಾಗಿ ಪೂಜೆಗಳು ನಡೆಯುತ್ತಿವೆ. ವರ್ಷದಲ್ಲಿ ಈ ಒಂದು ದಿನ ಮಾತ್ರ 12ಗಂಟೆಗಳ ಪುಣ್ಯ ಕ್ಷಣಗಳನ್ನ ಭಕ್ತರಿಗೆ ಮೀಸಲಿಟ್ಟಿದ್ದು ಭಕ್ತರು ಅಂದು ಬೇಡಿದ್ದನ್ನು ಆ ತಾಯಿ ನೆರವೇರಿಸುತ್ತಾಳೆಂಬ ಆಗಾಧವಾದ ನಂಬಿಕೆ ಇದೆ. ಆ ನಂಬಿಕೆಯಿಂದಲೇ ಸಾವಿರ ಸಂಖ್ಯೆಯಲ್ಲಿದ್ದ ಭಕ್ತರು ಇಂದು ಲಕ್ಷ ತಲುಪಿದೆ. ಸರ್ವರಿಗು ಶ್ರೀ ಕ್ಷೇತ್ರಕ್ಕೆ ಸ್ವಾಗತ ಕೋರುತ್ತೇನೆ. ಜೊತೆಯಲ್ಲಿ ಭಕ್ತರು ಹೆಚ್ಚಾಗಿ ಬರುವ ಕಾರಣ ಪ್ರತಿಯೊಬ್ಬರು ಎಚ್ಚರಿಕೆಯಿಂದಿರಿ. ಪೊಲೀಸರು, ಕ್ಷೇತ್ರದ ಸಿಬ್ಬಂದಿಗಳು ನೀಡುವ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ.

  • ಡಾ.ಮಲ್ಲೇಶ್ ಗುರೂಜಿ,‌ ಧರ್ಮದರ್ಶಿಗಳು, ಶ್ರೀಕ್ಷೇತ್ರ ಗೌಡಗೆರೆ, ಚನ್ನಪಟ್ಟಣ ತಾಲೂಕು, ಬೆಂಗಳೂರು ದಕ್ಷಿಣ ಜಿಲ್ಲೆ

About Author

Leave a Reply

Your email address will not be published. Required fields are marked *